ಪೀಕ್ಟೇ, ರಾವುಲ್ - ಪಿಯೆರೆ
	1846-1929. ಸ್ವಿಟ್ಸರ್ಲೆಂಡಿನ ಭೌತ ಹಾಗೂ ರಸಾಯನವಿಜ್ಞಾನಿ. 1846 ಏಪ್ರಿಲ್ 4ರಂದು ಜಿನೀವಾದಲ್ಲಿ ಜನನ. ಜಿನೀವಾ ಮತ್ತು ಪಾರಿಸ್ ನಗರಗಳಲ್ಲಿ ಭೌತ ಮತ್ತು ರಸಾಯನವಿಜ್ಞಾನಗಳನ್ನು ಅಭ್ಯಸಿಸಿ (1868-1870) ಬಳಿಕ ಸ್ವಿಟ್ಸರ್ಲೆಂಡಿಗೆ ಮರಳಿ ನಿಮ್ನೋಷ್ಣತಾ ಭೌತವಿಜ್ಞಾನದಲ್ಲಿ (ಅತಿಶೀತ ಭೌತವಿಜ್ಞಾನ) ಪ್ರಯೋಗ ಹಾಗೂ ಸಂಶೋಧನೆ ಕೈಗೊಂಡ. ಆಗ ವರ್ಧಿಸುತ್ತಿದ್ದ ಶೀತಲೀಕರಣ ಉದ್ಯಮ (ರೆಫ್ರಿಜರೇಶನ್ ಇಂಡಸ್ಟ್ರಿ) ಈತನನ್ನು ಬಲುವಾಗಿ ಆಕರ್ಷಿಸಿತ್ತು.  ಸಲ್ಫರ್ ಡೈ ಆಕ್ಸೈಡನ್ನು ಶೀತಕಾರೀ ಮಾಧ್ಯಮವಾಗಿ ಬಳಸಿಕೊಂಡು ಈತ ಅಭಿವರ್ಧಿಸಿದ ಸಂಪೀಡನಾ ಶೀತಲೀಕರಣ ವ್ಯವಸ್ಥೆ (ಕಂಪ್ರೆಶನ್ ರೆಫ್ರಿಜರೇಶನ್ ಸಿಸ್ಟಮ್) ಇತರ ವ್ಯವಸ್ಥೆಗಳಿಗಿಂತ ಎಷ್ಟೋ ಕಡಿಮೆ ಸಂಮರ್ದದಲ್ಲಿ ಕೆಲಸ ಮಾಡಿತು. ಆದರೆ ಇದರಲ್ಲಿ ಒಂದು ಕೊರತೆ ಇತ್ತು : ಶೀತಕಾರೀ ಮಾಧ್ಯಮ ನೀರಿನೊಡನೆ (ತೇವ) ಸಂಪರ್ಕಗೊಂಡು ಸಲ್ಫ್ಯೂರಸ್ ಆಮ್ಲವನ್ನು ಉತ್ಪಾದಿಸಿತ್ತಿತ್ತು ; ಇದು ಯಂತ್ರಭಾಗಗಳನ್ನು ತಿಂದು ಹಾಕುತ್ತಿತ್ತು.  ಹಾಗಿದ್ದರೂ ಪೀಕ್ಟೇ ಈ ಶೋಧನೆಯ ಏಕಸ್ವವನ್ನು (ಪೇಟೆಂಟ್) ಪಡೆದು ತನ್ನ ವ್ಯವಸ್ಥೆಯನ್ನು ಮಾರುಕಟ್ಟೆಗೆ ತಂದು ಯಶಸ್ಸು ಗಳಿಸಿದ.

	ವಾಸ್ತವವಾಗಿ ಪೀಕ್ಟೇ ಅಂತಾರಾಷ್ಟ್ರೀಯ ಖ್ಯಾತಿವೇತ್ತನಾದದ್ದು ವೈಜ್ಞಾನಿಕ ಸಂಶೋಧನೆಗಳಿಂದ.  ಆಕ್ಸಿಜನ್ ದ್ರವೀಕರಣದ ಸಿದ್ಧಿ ಅವನಿಗೆ ಇದನ್ನು ತಂದುಕೊಟ್ಟಿತು.  ಫ್ರಾನ್ಸಿನ ವಿಜ್ಞಾನಿ ಲೂಯಿ ಪಾಲ್ ಕಾಯ್ಟೇ (1832-1913) ಅನಿಲಗಳ ದ್ರವೀಕರಣ ಸಂಶೋಧನೆಯಲ್ಲಿ ಉದ್ಯುಕ್ತನಾಗಿದ್ದ : ಪ್ರಥಮ ಬಾರಿಗೆ ಅವನು ಹೈಡ್ರೋಜನ್, ನೈಟ್ರೋಜನ್, ಆಕ್ಸಿಜನ್ ಮತ್ತು ವಾಯುವನ್ನು ಸಂಪೀಡನ ಶೀತಲನ (ಕಂಪ್ರೆಶನ್ ಕೂಲಿಂಗ್) ಮತ್ತು ಹಠಾತ್ ವ್ಯಾಕೋಚನ (ಸಡನ್ ಎಕ್ಸ್‍ಪಾನ್ಶನ್) ಈ ವಿಧಾನದಿಂದ ಸಾಧಿಸಿದ್ದ (1877) ತನ್ನ ಈ ಸಿದ್ಧಿಯನ್ನು ಕಾಯ್ಟೇ ಪ್ಯಾರಿಸ್ ವಿಜ್ಞಾನ ಅಕಾಡಮಿಗೆ ವರದಿ ಮಾಡಲು ಅನುವಾಗುತ್ತಿದ್ದಾಗಲೇ, ಇದರ ಸುಳುಹು ಕೂಡ ಅರಿಯದಿದ್ದ ಪೀಕ್ಟೇ ತಾನು ಯಶಸ್ವಿಯಾಗಿ ಆಕ್ಸಿಜನ್ ದ್ರವೀಕರಣವನ್ನು ಸಾಧಿಸಿರುವುದಾಗಿ ಜಿನೀವಾದಿಂದ ಪ್ಯಾರಿಸಿಗೆ ತುರ್ತು ಕೇಬಲ್ ಕಳಿಸಿದ. ಇವನು ಅನುಸರಿಸಿದ್ದು ಕ್ಯಾಸ್ಕೇಡ್ (ಜಲಪಾತ) ವಿಧಾನವನ್ನು. ಇದರಲ್ಲಿ ಕ್ರಮಶಃ ಇಳಿದ ಅವಧಿಕ ಉಷ್ಣತೆಗಳಿರುವ ಮೂರು ವಿಭಿನ್ನ ಶೀತಲನ ಮಾಧ್ಯಮಗಳ ಶೀತಲೀಕರಣ ಚಕ್ರಗಳನ್ನು ಶ್ರೇಣಿಯಲ್ಲಿ ಅಳವಡಿಸಲಾಗಿತ್ತು.  ಹೀಗಾಗಿ ಮೊದಲಿಗೆ ದ್ರವೀಕರಿಸಲ್ಪಟ್ಟ ಅನಿಲ ಮುಂದಿನ ಅನಿಲವನ್ನು ದ್ರವೀಕರಿಸಲು ಶೀತಲಕವಾಗಿ (ಕೂಲೆಂಟ್) ವರ್ತಿಸುತ್ತಿತ್ತು.  ಪೀಕ್ಟೇ ಮೊದಲ ಚಕ್ರದಲ್ಲಿ ಸಲ್ಫರ್ ಡೈ ಆಕ್ಸೈಡನ್ನೂ ಎರಡನೆಯ ಚಕ್ರದಲ್ಲಿ ಕಾರ್ಬನ್ ಡೈ ಆಕ್ಸೈಡನ್ನೂ ಕೊನೆಯ ಚಕ್ರದಲ್ಲಿ ಆಕ್ಸಿಜನ್ನನ್ನೂ ಬಳಸಿದ್ದ.  ಕಾಯ್ಟೇ ತನ್ನ ಸಾಧನೆಯ ಮೊದಲತನವನ್ನು (ಕೆಲವೇ ವಾರಗಳು ಮಾತ್ರ) ಸ್ಥಾಪಿಸಿದ ನಿಜ ; ಆದರೆ ವಾಯುಮಂಡಲದ ಅನಿಲವೊಂದನ್ನು ಮೊದಲ ಬಾರಿಗೆ ದ್ರವೀಕರಿಸಿದ ಕೀರ್ತಿಯಲ್ಲಿ ಪೀಕ್ಟೇ ಕೂಡ ಸಹಭಾಗಿ ಎಂಬುದಾಗಿ ವಿಜ್ಞಾನಿಗಳು ಪರಿಗಣಿಸಿದ್ದಾರೆ.  ಹೈಡ್ರೋಜನ್ನನ್ನು ಕೂಡ ತಾನು ದ್ರವೀಕರಿಸುವುದಾಗಿ ಪೀಕ್ಟೇ ಪ್ರಕಟಿಸಿದ್ದ.  ಆದರೆ ಇದು ಸರಿ ಅಲ್ಲ, ದೋಷಪೂರಿತವಾದದ್ದು ಎಂಬುದಾಗಿ ಮುಂದೆ ತೋರಿಸಲಾಯಿತು.

	ಜಿನೀವಾ ವಿಶ್ವವಿದ್ಯಾಲಯ ಪೀಕ್ಟೇಯನ್ನು ಔದ್ಯಮಿಕ ಭೌತವಿಜ್ಞಾನದ ವರಿಷ್ಠನಾಗಿ (ಪೀಠ) 1879ರಲ್ಲಿ ನೇಮಕ ಮಾಡಿತು.  ಏಳು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದು, 1886ರಲ್ಲಿ, ಬರ್ಲಿನ್ನಿಗೆ ತೆರಳಿ ಅಲ್ಲಿ ಔದ್ಯಮಿಕ ಸಂಶೋಧನ ಪ್ರಯೋಗಾಲಯವನ್ನು ಸ್ಥಾಪಿಸಿದ.  ಸ್ವಂತ ಉಪಜ್ಞೆಗಳನ್ನು (ಇನ್ವೆನ್ಶನ್ಸ್) ಮಾರಿಕಟ್ಟೆಗೆ ತರುವುದು ಇವನ ಉದ್ದೇಶವಾಗಿತ್ತು.  ಈತನ ಶೀತಲೀಕರಣ ವ್ಯವಸ್ಥೆಯ ಮುಖ್ಯ ಘಟಕ ಈ ವೇಳೆಗೆ ಏಕಸ್ವ ಪಡೆಯಲಾಗಿದ್ದ ಲಿಕ್ವಿಡೆ ಪೀಕ್ಟೇ (ಪೀಕ್ಟೇ ದ್ರವ = ಸಲ್ಫರ್ ಡೈ ಆಕ್ಸೈಡ್ + ಕಾರ್ಬನ್ ಡೈ ಆಕ್ಸೈಡ್). ಈ ಶೀತಕಾರಿಗೆ ಉಷ್ಣಗತಿ ವಿಜ್ಞಾನದ ದ್ವಿತೀಯ ನಿಯಮ ಅನ್ವಯವಾಗುವುದಿಲ್ಲ ಎಂಬ ಪೀಕ್ಟೇಯ ಹೇಳಿಕೆ ಮತ್ತು ನಿಲವು ವಿವಾದಕ್ಕೆ ಎಡೆ ಮಾಡಿಕೊಟ್ಟವು.  ಆತನ ಶೀತಕಾರಿಗಳು, ಈ ಹಿಂದಿನಂತೆ, ಸಲ್ಫ್ಯೂರಸ್ ಆಮ್ಲದ ಹತಿಗೆ ಈಡಾಗುತ್ತಿದ್ದವು.  ಹೀಗಾಗಿ ಅವುಗಳಲ್ಲಿ ತೇವ ಸೋರದಂತೆ ಸಾಕಷ್ಟು ಏರ್ಪಾಡುಗಳು ಅಗತ್ಯವಾದವು. ಪೀಕ್ಟೆಯ ಶೀತಕಾರಿಗಳು ತಕ್ಕಮಟ್ಟಿಗೆ ವಾಣಿಜ್ಯ ಯಶಸ್ಸನ್ನು ಗಳಿಸಿದವು.  1929 ಜುಲೈ 27ರಂದು ಈತ ಪ್ಯಾರಿಸ್ಸಿನಲ್ಲಿ ಮಡಿದ.				    (ಡಿ.ಎಲ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ